ನಮ್ ಹುಡುಗಿ – ಮುಂದಿನ ಓಣಿ ಮಂಜಪ್ಪನವರ ಮಗಳು🙈

“ಬರೋಬ್ಬರಿ ಆರು ವರ್ಷದ ಮೇಲಾಯ್ತು ಹಾಳೆಗಳ ಮೇಲೆ ಬರೆದಿರುವ ಕಥೆಗಳನ್ನು ಜನರ ಮುಂದೆ ತರಬೇಕು,ತರಬೇಕು ಎಂದು ಆಶಿಸಿ… ನನ್ನ ನಾಚಿಕೆಯ ಸ್ವಭಾವಕ್ಕೊಂದು ಪೂರ್ಣವಿರಾಮವನಿಟ್ಟು ಒಂದು ಪುಟ್ಟ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಓದಿ. ಬೆಂಬಲದ ಜೊತೆಗೆ ಆಶೀರ್ವಾದವೂ ಇರಲಿ☺️”

“ಮೇರೆ ಸಪನೋಂಕಿ ರಾಣಿ ಕಬ್ ಆಯೆಗಿ ತು” ಹಾಡು ಕಿವೀಲಿ full volume ನಲ್ಲಿ ಆರ್ಭಟಿಸುತ್ತಿತ್ತು. ಅವತ್ತು ಸಂಜೆ ಸುಮ್ಮನೆ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ನಿಂತಿದ್ದ ನನಗೆ ಯಾಕಾರ ಕಂಡಳೋ ಮಾರಾಯತಿ. ಸಾಕ್ಷಾತ್ ಮಹಾಲಕ್ಷ್ಮಿ. ಆವತ್ತು ಪೂರ್ತಿ ನಿದ್ದೆಗೆಡಿಸಿಬಿಟ್ಟಳು.  ಮುಂದೆ ಮೂರು ದಿನಕ್ಕೆ “ಅವಳು ನಮ್ಮ ಮುಂದಿನ ಓಣಿಯ ಮಂಜಪ್ಪನವರ ಮಗಳು ಮೊನ್ನೆ ತಾನೆ ಊರಿಗೆ ಬಂದಿದ್ದಾಳೆ ಒಂದು ವಾರ ಆಗಿರಬೇಕು ಪಾಪ  ಹುಡುಗಿ ಸಂಪನ್ನೆ” ಅನ್ನುವ ನಮ್ಮ ಅವ್ವನ  ಮಾತು ಕೇಳಿ ಅವತ್ತು ರಾತ್ರಿ ನಮ್ಮ ಗೆಳೆಯರಿಗೆಲ್ಲ ಎಗ್ ರೈಸ್ ಪಾರ್ಟಿ ಕೊಡಿಸಿದ್ದೆ, ಮನೆಗೆ ಬಂದು ಭರ್ಜರಿ ನಿದ್ದೆಗೆ ಜಾರಿದ್ದೆ.

ಅಂದು ಮುಂಜಾನೆ ನೀಟಾಗಿ ರೆಡಿಯಾಗಿ ಬಸ್ಟ್ಯಾಂಡಿನಲ್ಲಿ ನಿಂತಿದ್ದೆ. ಆಕಡೆಯಿಂದ ಒಂದು ಸ್ಕೂಟಿ ಬಂತು. ಯಾರಿರಬಹುದು ಅಂತ ನೋಡಿದರೆ ನಮ್ಮ ಹುಡುಗಿನೇ!! ನನ್ನ ನೋಡಿ ಸಣ್ಣದೊಂದು ನಗು ಚೆಲ್ಲಿ ಮುಂದೆ ಸಾಗಿದಳು. ಅಯ್ಯೋ.. ನನಗಂತೂ ಮೈ ಜುಮ್ ಅಂದಂಗಾಯ್ತು. ಅವಳ “vespa” ಸ್ಕೂಟಿ ಮೇಲೆ ಆಣೆ ಮಾಡಿ ಹೇಳ್ತೀನಿ ಅವಳಂತೂ ಎಲ್ಲ ಹುಡುಗಿಯರ ಥರ ಅಲ್ಲ ಬಿಡಿ. ಅಹಂ ಕಾಣಿಸುತ್ತಿರಲಿಲ್ಲ, ಸಿಂಪಲ್ ಹುಡುಗಿ, ದೇವರು ಸರಳತೆ, ಸಂಪ್ರದಾಯ ಅನ್ನುವ ಗುಣಗಳನ್ನು ಅಳತೆ ಮಾಡದೆ ಜಾಸ್ತಿಯೇ ಹಾಕಿ ಕಳುಹಿಸಿದ್ದ ಅನ್ನಿಸುತ್ತೆ, ಅಂದದ ಗೊಂಬೆಯ ತರಹ ಕಾಣುವ ಅವಳಿಗೆ ಮರುಳಾಗಿದ್ದೆ ನಾನು. ಇವಾಗಲೇ ಪ್ರಪೋಸ್ ಮಾಡಿಬಿಡಬೇಕು ಅನ್ನುವಷ್ಟರಲ್ಲಿ ನನ್ನ ಕಾಲೇಜ್ ಬಸ್ಸು ಬಂದೇಬಿಟ್ಟಿತು.

ಕಾಲೇಜು ಮುಗಿಸಿಕೊಂಡು ಬಂದವನೇ ಅವಳನ್ನು ಹುಡುಕೋಕೆ ನಾನು ಮತ್ತೆ ನನ್ನ “Pulsar 150” ರೆಡಿ ಆದ್ವಿ. ಸಂಜೆ ಗ್ರಾಮದೇವತೆ ಗುಡಿ ಹತ್ತಿರ ಸಿಕ್ಕಳು ಮಾರಾಯ್ತಿ ಅಯ್ಯೋ ಏನು ಹೇಳೋದ್ರೀ.. ಏರಿಸಿ ತಲೆ ಬಾಚಿಕೊಂಡು ಮುಂಗುರುಳ ಬಿಟ್ಟುಕೊಂಡು, ಹಣೆಗೆ ಚಂದದ ಚಿಕ್ಕ ಬೊಟ್ಟನ್ನಿಟ್ಟುಕೊಂಡು, ಜಡೆಗೆ ಬೆಳ್ಳನೆ ಮಲ್ಲಿಗೆ ಹೂವು ಮುಡಿದುಕೊಂಡು, ಆಕಾಶ ನೀಲಿ ಬಣ್ಣದ ಲೆಹೆಂಗಾವನ್ನ ನೀಟಾಗಿ ತೊಟ್ಟುಕೊಂಡು, ಬೆಳ್ಳನೆಯ ಮುಖದ ಮೇಲೆ ಮಂದಹಾಸವನ್ನಿಟ್ಟುಕೊಂಡು ಮೆಲ್ಲನೆಯ ನಡಿಗೆಯಲ್ಲಿ ಬರ್ತಿದ್ರೆ.. ನನಗಂತೂ ಸ್ವರ್ಗಕ್ಕೆ ಒಂದೇ ಗೇಣು!! ಅವಳ ಚಂದಕ್ಕೆ ಚಂದಾದಾರನಾಗಿ ಹೋಗಿದ್ದೆ. ಅವಳು ನನ್ನ ದಾಟಿ ಅಷ್ಟು ದೂರ ಹೋದರು ನನಗೆ ಅರಿವಿರಲಿಲ್ಲ. ಬೆಪ್ಪನಂತೆ ಅವಳನ್ನೇ ನೋಡುತ್ತ ನಿಂತಿದ್ದೆ. ತಡ ಮಾಡುವುದು ಬೇಡ ಎಂದು ಒಂದು 500 ರೂಪಾಯಿಗೆ ಗ್ರೀಟಿಂಗ್ ಕಾರ್ಡ್ ತೆಗೆದುಕೊಂಡು ಅದರಲ್ಲಿ ನನ್ನ ಪ್ರೀತಿಯ ಕೋರಿಕೆಯ ಜೊತೆಗೆ ಒಂದು ಗುಲಾಬಿಯನ್ನಿಟ್ಟು ಅವಳು ಮರುದಿನ ಬೆಳಗಿನ ಜಾವ ಆರು ಗಂಟೆಗೆ ಮನೆಯ ಮುಂದೆ ರಂಗೋಲಿ ಹಾಕಲು ಬಂದಾಗ ಅವಳ ಕಡೆಗೆ ಎಸೆದೆ. ನನ್ನ ದುರಾದೃಷ್ಟ ಅದು ಹೋಗಿ ಹಿಂದೆ ಬರುತ್ತಿದ್ದ ಅವಳಪ್ಪನ ಮೇಲೆ ಬಿತ್ತು!! ನಾನು ಅವನನ್ನು ಗಮನಿಸಿಯೇ ಇರಲಿಲ್ಲ. ಮೊದಲೇ ಅವನಿಗೆ ನನ್ನ ವಾಸನೆ ಹತ್ತಿತ್ತು ಅಂಥದರಲ್ಲಿ ಗ್ರೀಟಿಂಗ್ ಕಾರ್ಡ್ ನೋಡಿ ಸಾಲ ಕೊಟ್ಟವನಂತೆ ನನ್ನನ್ನು ಅಟ್ಟಿಸಿಕೊಂಡು ಬಂದ. ನಾನೂ ಓಡಿದೆ.. ಓಡಿದೆ.. ದಾರಿಯಲ್ಲಿ ಒಂದು ಮನೆಯ ಮುಂದೆ ಅಂಗಳಕ್ಕೆ ಎರಚುತ್ತಿದ್ದ ನೀರೆಲ್ಲ ನನ್ನ ಮೇಲೆಯೇ ಬಿತ್ತು ಆಗ ಥಟ್ ಅಂತ ಎಚ್ಚರವಾಯಿತು!!

“ಏನ್ಲಾ ಬೇವರ್ಸಿ ಗಂಟೆ ಎಂಟಾಯಿತು ಏಳು ಮ್ಯಾಕೆ” ಅಂತ ನಮ್ಮವ್ವ ಖಾಲಿಯಾದ ನೀರಿನ ಚೊಂಬನ್ನ ಹಿಡಿದು ಗದರಿಸಿದಾಗಲೇ ಗೊತ್ತಾಗಿದ್ದು ಇಷ್ಟೊತ್ತು ನಡೆದದ್ದು ಕನಸು ಅಂತ!! ಎಲ್ಲಿಯ 500 ರೂಪಾಯಿಯ ಗ್ರೀಟಿಂಗ್ ಕಾರ್ಡು, ಎಲ್ಲಿಯ “Pulsar 150” ಬೈಕು. ಎದ್ದು ಬಯಲಕಡೆಗೆ ನಡೆದಾಗ ಗೆಳೆಯರೆಲ್ಲ “ಏನೋ ನಿನ್ನೆ ರಾತ್ರಿ ಎಗ್ ರೈಸ್ ಪಾರ್ಟಿ ಆದಮೇಲೆ ಮನೆಗೆ ಹೋಗಿ ಬರುತ್ತೇನೆ ಅಂದವನು ವಾಪಸ್ ಬರಲೇ ಇಲ್ಲ?” ಅಂತ ಕೇಳಿದಾಗ ನನ್ನ ಕನಸು ಇನ್ನೊಮ್ಮೆ ನೆನಪಾಯಿತು. ಮೈ ಜುಮ್ ಅಂದಿತು. ಮನೆಗೆ ಬಂದು ಮೂಲೆಯಲ್ಲಿ ಪಂಚರ್ ಆಗಿ ಬಿದ್ದಿದ್ದ ನನ್ನ ಹೀರೋ ಸೈಕಲ್ ಅನ್ನು ತಳ್ಳಿಕೊಂಡು ಶಂಕ್ರಣ್ಣನ ಗ್ಯಾರೇಜ್ ಕಡೆಗೆ ನಡೆದೆ. ನನ್ನ ಯೋಚನೆ, ಮನಸು, ಎಲ್ಲವೂ ಆ ಸಪನೋಂಕಿ ರಾಣಿ ಮುಂದಿನ ಓಣಿ ಮಂಜಪ್ಪನವರ ಮಗಳ ಕಡೆಗೇ ಜಾರಿತ್ತು….

Create your website with WordPress.com
Get started